ಕವನ ೨

ನವದುರ್ಗೆ ದೇವಿಯರು


**ದೇವಿ ಶೈಲಪುತ್ರಿ**


ನವರಾತ್ರಿಯ ಪ್ರಥಮ ದಿನದೆ

ವಂದಿಪೆನು ನಿನಗೆ ತಾಯಿಯೆ

ವೃಷಭಾರೂಡೆ ಚಂದ್ರಚೂಡೆಯೆ

ಪದ್ಮಹಸ್ತೆಯೆ ತ್ರಿಶೂಲಪಾಣಿಯೆ

ಹಿಮಗಿರಿತನಯೆ ಶೈಲಪುತ್ರಿಯೆ

ಕಷ್ಟವ ನೀಗಿಸಿ ಕೊಡು ಮನೋಬಲವನೆ

 ಎಂದು  ಬೇಡುವೆನು ನಿನ್ನಲ್ಲಿ ತಾಯೆ        

  ✍️ ವಸುದಾ

                                                                  

  

**ದೇವಿ ಬ್ರಹ್ಮಚಾರಿಣಿ**


ಶಾಂತರೂಪಳೆ ಶಕ್ತಿದಾತಳೆ

ಙ್ಞಾನ ವೈರಾಗ್ಯ ಸಿದ್ಧಳೆ

ಜಪಮಾಲಾ ಕಮಂಡಲುಧಾರಳೆ

ಶ್ವೇತವಸ್ತ್ರಧಾರಿಯೆ ಯುವತಿಯೆ

ವಂದಿಪೆ ನಿನಗೆ ದ್ವಿತೀಯ ದಿನದೆ 

ದುರ್ಗೆ ಶ್ರೀ ಬ್ರಹ್ಮಚಾರಿಣಿ ದೇವಿಯೇ                 ✍️ವಸುದಾ

                                                                       18/10/2020


**ದೇವಿ ಚಂದ್ರಘಂಟಾ**


ಅರ್ಧಚಂದ್ರಾಕಾರದಿ ಘಂಟೆಯ 

ಹಣೆಯಲಿ ಧರಿಸಿದ ಸುಂದರ ರೂಪಳೆ

ದುಷ್ಟರ ಶಿಕ್ಷಿಸಲು ಹಣೆಗಣ್ಣ ತೆರೆದಿರುವವಳೆ

ಹತ್ತು ಕೈಗಳಲಿ ಶಸ್ತ್ರಗಳ ಧರಿಸಿದವಳೆ

ರಕ್ತವರ್ಣದ ವಸ್ತ್ರವನ್ನುಟ್ಟು ಸಿಂಹವಾಹಿನಿಯಾಗಿ

ಶಿಷ್ಟರ ರಕ್ಷಿಪ ಶ್ರೀ ಚಂದ್ರಘಂಟಾದೇವಿಯೆ

ನಮಿಪೆನು ನಿನಗೆ ನವರಾತ್ರಿಯ ತೃತೀಯ ದಿನದೆ     ✍️ವಸುದಾ

                                                                              19/10/2020


**ದೇವಿ ಶ್ರೀ ಕೂಷ್ಮಾಂಡ**


ಜಗತ್ಸೃಷ್ಟಿಕರ್ತಳೆ ಸದಾ ಹಸನ್ಮುಖಳೆ 

ಅಷ್ಟಸಿದ್ಧಿ ನವಸಿದ್ಧಿಧಾತ್ರೆಯೆ

ಅಷ್ಟ ಬಾಹುಗಳಿಂದ ಕೂಡಿದವಳೆ

 ಶರಚಾಪ ಪದ್ಮಚಕ್ರ ಗದಾ ಜಪಮಾಲಾ

 ಕಮಂಡಲು ಕಲಶವನು ಹಿಡಿದವಳೆ

ವ್ಯಾಘ್ರ ವಾಹಿನಿ ಶ್ರೀ ಕೂಷ್ಮಾಂಡ ದೇವಿಯೆ

ನಮಿಪೆನು ಈ ನವರಾತ್ರಿಯ ಚತುರ್ಥಿಯ ದಿನದೆ      ✍️ ವಸುದಾ

                                                                               20/10/2020





**ದೇವಿ ಸ್ಕಂದಮಾತ**


ಶ್ವೇತವರ್ಣ ಶರೀರೆ ದೇವಿ ಚರ್ತುಭುಜೆಯೆ

ಬಾಲಸ್ಕಂದನ ಪಿಡಿದಿರುವವಳೆ

ಮತ್ತೆರಡು ಕೈಗಳಲಿ ಕಮಲಗಳ ಪಿಡಿದವಳೆ ವರದಹಸ್ತೆಯೆ ಮಾತೃ ಸ್ವರೂಪಳೆ

ಭಕ್ತರನು ಸಲಹಲು ಬಂದ ಮಮತಾಮಯಳೆ

ಸಿಂಹವಾಹಿನಿಯೆ ಸ್ಕಂದಮಾತೆಯೆ

ನಮಿಪೆನು ಈ ನವರಾತ್ರಿಯ ಐದನೆಯ ದಿನದೆ          ✍️ವಸುದಾ

                                                                               21/10/2020



**ದೇವಿ ಕಾತ್ಯಾಯಿನಿ**


ಭುವಿಯಲ್ಲಿರುವ ದುಷ್ಟರ ಶಕ್ತಿಯಡಗಿಸಲು

ಮಗಳಾಗಿ ಬಂದೆ ಆ ಋಷಿ ಕಾತ್ಯಾಯನನಿಗೆ

ತ್ರಿನೇತ್ರೆಯಾಗಿ ಅರ್ಧಚಂದಿರ ಹಣೆಯಲಿರಲು

ಚರ್ತುಭುಜೆಯಾಗಿ ಕಮಲ ಖಡ್ಗವ ಪಿಡಿದಿರಲು

ಅಭಯ ಮುದ್ರೆಗಳ ತೋರುವೆ ನಂಬಿದ ಭಕ್ತರಿಗೆ

ಸಕಲಸಂಪದವೀವ ಸಿಂಹವಾಹಿನಿ ಶ್ರೀ ಕಾತ್ಯಾಯಿನಿಗೆ

ನಮಿಪೆನು ಈ ನವರಾತ್ರಿಯ ಆರನೆಯ ದಿನದೆ          ✍️ವಸುದಾ

                                                                              22/10/2020




      **ದೇವಿ ಕಾಳರಾತ್ರಿ**


ಕಪ್ಪನೆಯ ಬಣ್ಣದ ಶರೀರವ ಹೊಂದಿರುವವಳೆ

ಕೆದರಿದಂತಿರುವ ಉದ್ದನೆಯ ಕೂದಲಿರುವವಳೆ

ಬಲಗೈಗಳಲಿ ಅಭಯ ವರದ ಮುದ್ರೆಗಳ ತೋರುತ

ನಿನ್ನ ನಂಬಿದ ಭಕ್ತರ ಸದಾ  ಕಾಯುವ ಶುಭಂಕರಳೆ

ಎಡಗೈಗಳಲಿ ಖಡ್ಗ  ವಜ್ರಾಯುಧಗಳ ಪಿಡಿಯುತ

ದುಷ್ಟರ ಪಾಲಿಗೆ ನೀ ಮೃತ್ಯುದೇವಿ ಭಯಂಕರಳೆ

ಗಾರ್ಧಭವಾಹಿನಿಯೆ ತ್ರಿನೇತ್ರೆ ಶ್ರೀ ಕಾಳರಾತ್ರಿಯೆ

ನಮಿಪೆನು ಈ ನವರಾತ್ರಿಯ ಏಳನೆಯ ದಿನದೆ        ✍️ವಸುದಾ

                                                                              23/10/2020



**ದೇವಿ ಮಹಾಗೌರಿ**


ಸರ್ವಮಂಗಳೆ ಕೋಟಿಸೂರ್ಯಪ್ರಕಾಶಳೆ

ಶ್ವೇತವರ್ಣದಿ ಶೋಭಿಸುವ ಪ್ರಸನ್ನವದನಳೆ

ಚರ್ತುಭುಜೆಯೆ ತ್ರಿಶೂಲ ಡಮರುಧಾರಿಣಿಯೆ

ಅಭಯಹಸ್ತದಿ ಹರಸುವ ಮಹಾಮಾತೆಯೆ

ಭಕುತರ ಎಲ್ಲ ಕಷ್ಟಗಳ ನಿವಾರಿಸುವ ತಾಯೆ

ನಂದಿವಾಹಿನಿಯೆ ದೇವಿ ಶ್ರೀ ಮಹಾಗೌರಿಯೆ

ನಮಿಪೆನು ಈ ನವರಾತ್ರಿಯ ಎಂಟನೆಯ ದಿನದೆ      ✍️ವಸುದಾ

                                                                               24/10/2020

 

     **ದೇವಿ ಸಿದ್ಧಿಧಾತ್ರಿ**


ಕಮಲಾಸನೆಯೆ ಚರ್ತುಭುಜಳೆ

ಶಂಖ ಚಕ್ರಗದಾಪದ್ಮ ಹಸ್ತಳೆ

ಅಣಿಮಾದಿ ಸಿದ್ಧಿಪ್ರದಾತಳೆ

ಭಕ್ತರ ಸಂಕಷ್ಟಗಳ ಪರಿಹರಿಸಿ

ಸಕಲ ಸೌಖ್ಯಗಳ ನೀಡುವವಳೆ

ಪರಮಾನಂದಳೆ ತಾಯೆ ಶಿವಪತ್ನಿಯೆ

ಮೋಕ್ಷದಾಯಿನಿ ದೇವಿ ಜಗದಂಬೆಯೆ

ನಮಿಪೆನು ಈ ನವರಾತ್ರಿಯ ಒಂಬತ್ತನೆ ದಿನದೆ     ✍️ ವಸುದಾ

                                                                          25/10/2020



**ದೇವಿ ಶ್ರೀ ಚಾಮುಂಡಿ**


ನವದುರ್ಗೆಯ ರೂಪದಲ್ಲಿ ಕಂಗೊಳಿಸಿದ

ದುಷ್ಟ ರಕ್ಕಸರ ವಧಿಸಿ ಸುರನರರೆಲ್ಲರ ಕಾಪಾಡಿ

ಬಿಜಯಂಗೈದ ವಿಜಯಲಕ್ಷ್ಮಿ ಶ್ರೀ ಚಾಮುಂಡಿ

ವಂದಿಪೆನು ನಿನಗೆ ವಿಜಯದಶಮಿಯ ಶುಭದಿನದೆ


✍️ವಸುದಾ

26/10/2020





                       













Comments